IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸರ್ಕಾರದಿಂದ ಸುವಿಧಾ ಅಗ್ಗದ ನ್ಯಾಪ್‍ಕಿನ್

ಸರ್ಕಾರದಿಂದ ಸುವಿಧಾ ಅಗ್ಗದ ನ್ಯಾಪ್‍ಕಿನ್

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಸುವಿಧಾ ಎಂಬ ಹೆಸರಿನಲ್ಲಿ ಶೇಕಡ 100ರಷ್ಟು ಆಮ್ಲಜನಕದಿಂದ ಕರಗಿಸಬಹುದಾದ (ಆಕ್ಸೋ- ಬಯೋಡಿಗ್ರೇಡೆಬಲ್) ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕಾರ್ಯಕ್ರಮದಡಿ ಇದನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಅನಂತ್ ಕುಮಾರ್ ಅವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಇದನ್ನು ಬಿಡುಗಡೆ ಮಾಡಿದರು.

ಪ್ರಮುಖ ಅಂಶಗಳು

ಈ ಕೈಗೆಟುಕುವ ಬೆಲೆಯ ಸುವಿಧಾ ಸ್ಯಾನಿಟರಿ ನ್ಯಾಪ್‍ಕಿನ್‍ಗಳು ದೇಶಾದ್ಯಂತ ಇರುವ 3200 ಜನೌಷಧಿ ಕೇಂದ್ರಗಳಲ್ಲಿ 2.5 ರೂಪಾಯಿ ದರದಲ್ಲಿ ಲಭ್ಯ. ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಎಲ್ಲರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯಸೇವೆಯನ್ನು ಒದಗಿಸುವ ದೃಷ್ಟಿಕೋನದ ಅಡಿಯಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಇದು ದೇಶದ ಅಸಂಖ್ಯಾತ ದುರ್ಬಲ ವರ್ಗದ ಮಹಿಳೆಯರಿಗೆ ಸ್ವಚ್ಛತಾ, ಸ್ವಾಸ್ಥ್ಯ ಮತ್ತು ಸುವಿಧ ಸೌಲಭ್ಯವನ್ನು ಕಲ್ಪಿಸಲಿದೆ. ಇದು ಕೈಗೆಟುಕುವ ದರದಲ್ಲಿ ಪೂರೈಕೆಯಾಗಲಿದ್ದು, ಅತ್ಯಧಿಕ ಗುಣಮಟ್ಟದ ನೈರ್ಮಲ್ಯದಿಂದ ಕೂಡಿದೆ. ಇದು ಬಳಸಲು ಮತ್ತು ವಿಲೇವಾರಿಗೆ ಅತ್ಯಂತ ಸುಲಭವಾದ ಸ್ಯಾನಿಟರಿ ನ್ಯಾಪ್‍ಕಿನ್ ಆಗಿರುತ್ತದೆ.

ಸುವಿಧಾ ನ್ಯಾಪ್‍ಕಿನ್‍ನಲ್ಲಿ ವಿಶೇಷವಾದ ಸಂಯೋಜಕವನ್ನು ಸೇರಿಸಲಾಗಿದೆ. ಇದರಿಂದಾಗಿ ಬಳಕೆ ಮಾಡಿ ಎಸೆದಾಗ ಇದು ಆಮ್ಲಜನಕದೊಂದಿಗೆ ಸಂಯೋಗ ಹೊಂದಿ ಸಂಪೂರ್ಣವಾಗಿ ಮಣ್ಣಿನಲ್ಲಿ ಕರಗುತ್ತದೆ. ಇದರಿಂದ ಯಾವುದೇ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ. ಮಹಿಳೆಯರಿಗೆ ನೈರ್ಮಲ್ಯ ಸಾಧನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ನಿಟ್ಟಿನಲ್ಲಿ ಸುಧೀರ್ಘ ಪಯಣ ಮಾಡಬೇಕಿದ್ದು, ಅದರಲ್ಲೂ ಮುಖ್ಯವಾಗಿ ದುರ್ಬಲ ವರ್ಗದವರಿಗೆ ಈ ಸೌಲಭ್ಯ ಸಿಗುವುದು ದುರ್ಲಬವಾಗಿದೆ. ಆದರೆ ಸುವಿಧಾ ನ್ಯಾಪ್‍ಕಿನ್‍ಗಳು ದೇಶದ ಎಲ್ಲ ಜನೌಷಧಿ ಕೇಂದ್ರಗಳಲ್ಲಿ 'ವಿಶ್ವ ಋತುಸ್ರಾವ ನೈರ್ಮಲ್ಯ ದಿನ (2018ರ ಮೇ 28)'ದ ವೇಳೆಗೆ ಲಭ್ಯವಾಗಲಿವೆ.

ಹಿನ್ನೆಲೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-2016 (ಎನ್‍ಎಚ್‍ಎಫ್‍ಎಸ್) ರ ಪ್ರಕಾರ, 15 ರಿಂದ 24 ವರ್ಷ ವಯಸ್ಸಿನ ಮಹಿಳೆಯರ ಪೈಕಿ ಶೇಕಡ 58ರಷ್ಟು ಮಂದಿ, ಸ್ಥಳೀಯವಾಗಿ ಸಿದ್ಧಪಡಿಸಿದ ನ್ಯಾಪ್‍ಕಿನ್, ಸ್ಯಾನಿಟರಿ ನ್ಯಾಪ್‍ಕಿನ್ ಮತ್ತು ಹತ್ತಿಯ ಉಂಡೆ (ಟ್ಯಾಂಪೂನ್) ಬಳಸುತ್ತಾರೆ. ಇದಲ್ಲದೇ ಗ್ರಾಮೀಣ ಪ್ರದೇಶಗಳ ಶೇಕಡ 48ರಷ್ಟು ಮಹಿಳೆಯರಿಗೆ ಮಾತ್ರ ಉತ್ತಮ ಗುಣಮಟ್ಟದ ಹಾಗೂ ಸ್ವಚ್ಛ ಸ್ಯಾನಿಟರಿ ನ್ಯಾಪ್‍ಕಿನ್‍ಗಳು ದೊರೆಯುತ್ತವೆ. ನಗರ ಪ್ರದೇಶದಲ್ಲಿ ಶೇಕಡ 78ರಷ್ಟು ಮಹಿಳೆಯರು ತಮ್ಮ ಋತುಸ್ರಾವದ ಅವಧಿಯಲ್ಲಿ ನೈರ್ಮಲ್ಯ ಕ್ರಮಗಳನ್ನು ಅನುಸರಿಸುತ್ತಾರೆ. ಋತುಸ್ರಾವದ ಅವಧಿಯಲ್ಲಿ ಅನೈರ್ಮಲ್ಯದ ನ್ಯಾಪ್‍ಕಿನ್‍ಗಳನ್ನು ಅಥವಾ ಪರ್ಯಾಯವಾಗಿ ಇತರ ಸಾಧನಗಳನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬ್ರಾಂಡೆಡ್ ನ್ಯಾಪ್‍ಕಿನ್‍ಗಳನ್ನು ಖರೀದಿಸುವ ಶಕ್ತಿ ಇಲ್ಲದ ಕಾರಣ ಗ್ರಾಮೀಣ ಬಡ ಹಾಗೂ ದುರ್ಬಲ ಮಹಿಳೆಯರು ಫಂಗಸ್ ಸೋಂಕು, ಮೂತ್ರನಾಳದ ಸೋಂಕು, ಗರ್ಭಾಶಯ ಸೋಂಕು, ಗರ್ಭಕೋಶದ ಕ್ಯಾನ್ಸರ್‍ನಂಥ ಭೀಕರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವೊಮ್ಮೆ ಇದು ಮಹಿಳೆಯರಲ್ಲಿ ಸಂತಾನಶಕ್ತಿಹೀನತೆಗೂ ಕಾರಣವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಣ್ಣಿನಲ್ಲಿ ಕರಗದ ಸ್ಯಾನಿಟರಿ ನ್ಯಾಪ್‍ಕಿನ್‍ಗಳ ವಿಲೇವಾರಿ ದೊಡ್ಡ ಪ್ರಮಾಣದ ಪರಿಸರ ಸಮಸ್ಯೆಯಾಗಿ ದೇಶದ ಎಲ್ಲ ನಗರಗಳನ್ನು ಕಾಡುತ್ತಿದೆ.

ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನಾ (ಬಿಎಂಬಿಜೆಪಿ)

ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನಾ (ಬಿಎಂಬಿಜೆಪಿ) ಯೋಜನೆಯನ್ನು ಕೇಂದ್ರ ಔಷಧ ಇಲಾಖೆ ಆರಂಭಿಸಿದೆ. ಇದು ಗುಣಮಟ್ಟದ ಔಷಧಿಯನ್ನು ಜನಸಮುದಾಯಕ್ಕೆ ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಉದ್ದೇಶದಿಂದ ಆರಂಭವಾಗಿದೆ. ಔಷಧಿಗಳನ್ನು ವಿತರಿಸುವ ಕೇಂದ್ರಗಳಿಗೆ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳೆಂದು ಕರೆಯುತ್ತಾರೆ. ವಿಶೇಷ ಜನೌಷಧ ಕೇಂದ್ರಗಳು, ಜೆನರಿಕ್ ಔಷಧಿಗಳನ್ನು ಜನಸಾಮಾನ್ಯರಿಗೆ ಒದಗಿಸುತ್ತವೆ. ದುಬಾರಿ ಔಷಧಗಳಷ್ಟೇ ಗುಣಮಟ್ಟದ ಮತ್ತು ಪರಿಣಾಮಕಾರಿ ಔಷಧಿಯನ್ನೇ ಕಡಿಮೆ ದರದಲ್ಲಿ ನೀಡಲಾಗುತ್ತದೆ.

ಉದ್ದೇಶಗಳು

  • ದೇಶದ ಎಲ್ಲರಿಗೂ ಗುಣಮಟ್ಟದ ಔಷಧಿ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದು. ಅದರಲ್ಲೂ ಮುಖ್ಯವಾಗಿ ಬಡವರು ಹಾಗೂ ದುರ್ಬಲವರ್ಗದವರಿಗೆ ಜನ ಔಷಧಿ ಮೆಡಿಕಲ್ ಸ್ಟೋರ್ಗಳ ಮೂಲಕ ಇದನ್ನು ವಿತರಿಸುವುದು ಮುಖ್ಯ ಉದ್ದೇಶವಾಗಿದೆ.
  • ಆರೋಗ್ಯಕ್ಕೆ ಮಾಡುವ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ರೋಗಿ/ ರೋಗಿಯ ಕುಟುಂಬದವರು ಕೈಯಿಂದ ಮಾಡಬೇಕಾದ ವೆಚ್ಚಕ್ಕೆ ಇಂಥ ಅಗ್ಗದ ಔಷಧಿಯ ಮೂಲಕ ಕಡಿವಾಣ ಹಾಕುವುದು. ಹಿನ್ನೆಲೆಯಲ್ಲಿ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಕೈಗೆಟುಕುವ ದರದಲ್ಲಿ ನೀಡಲಾಗುತ್ತದೆ.

ದೃಷ್ಟಿ

  • ಜೆನರಿಕ್ ಔಷಧಿಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು.
  • ವೈದ್ಯರ ಮೂಲಕ ಜೆನರಿಕ್ ಔಷಧಿಗಳಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುವುದು.
  • ಎಲ್ಲ ಚಿಕಿತ್ಸೆಗಳಿಗೂ ಜೆನರಿಕ್ ಔಷಧಿಗಳು ದೊರೆಯುವಂತೆ ಮಾಡುವುದು.
  • ಯೋಜನೆಯಡಿ ಆರೋಗ್ಯ ಸೇವೆಯ ಎಲ್ಲ ಇತರ ಉತ್ಪನ್ನಗಳು ಕೂಡಾ ಲಭ್ಯವಾಗುವಂತೆ ಮಾಡುವುದು.
  • ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಅತ್ಯಧಿಕ ಬೆಲೆಯ ಔಷಧಿಗೂ ಗುಣಮಟ್ಟಕ್ಕೂ ಸಂಬಂಧವಿಲ್ಲ ಎಂಬ ಬಗ್ಗೆ ಜನಜಾಗೃತಿ ಮೂಡಿಸುವುದು.

Comment