IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸರಸ್ ಲಘು ಸಾರಿಗೆ ವಿಮಾನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಸರಸ್ ಲಘು ಸಾರಿಗೆ ವಿಮಾನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭಾರತ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಸಾರಿಗೆ ವಿಮಾನ ಸರಸ್ ಪಿಟಿ1ಎನ್ ತನ್ನ ಎರಡನೇ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಸರಸ್ ಪಿಟಿ1ಎನ್ 20 ಸರಣಿ ಪರೀಕ್ಷಾರ್ಥ ಹಾರಾಟಗಳಲ್ಲಿ ಇದು ಎರಡನೇ ಪರೀಕ್ಷಾರ್ಥ ಹಾರಾಟವಾಗಿದೆ. ಲಘು ಸಾರಿಗೆ ವಿಮಾನದ ಉತ್ಪಾದನಾ ಅವತರಣಿಕೆ ಸಿದ್ಧಪಡಿಸುವ ಮುನ್ನ 20 ಪರೀಕ್ಷಾರ್ಐ ಹಾರಾಟ ನಡೆಸಲು ಉದ್ದೇಶಿಸಲಾಗಿದೆ. ಮೊದಲನೇ ಪರೀಕ್ಷಾರ್ಥ ಹಾರಾಟ 2017 ಜನವರಿಯಲ್ಲಿ ಯಶಸ್ವಿಯಾಗಿತ್ತು. ಭಾರತೀಯ ವಾಯುಪಡೆ (ಐಎಎಫ್) ಆರಂಭಿಕ ಹಂತದಲ್ಲಿ ಇಂಥ 15 ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದೆ.

ಸರಸ್ ಪಿಟಿ1ಎನ್

ಸರಸ್ ಪಿಟಿ1ಎನ್ ವಿಮಾನವು ಮೊಟ್ಟಮೊದಲ ಭಾರತೀಯ ವಿವಿಧೋದ್ದೇಶದ ನಾಗರಿಕ ವಿಮಾನವಾಗಿದ್ದು, ಲಘು ಸಾರಿಗೆ ವಿಮಾನ ವರ್ಗದಲ್ಲಿ ಇದನ್ನು ಸೆಂಟರ್ ಫಾರ್ ಸೈನ್ಸ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ (ಸಿಎಸ್ಐಆರ್)- ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್) ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದರ ಅಭಿವೃದ್ಧಿ ಹಾಗೂ ವಿನ್ಯಾಸವನ್ನು ಸಿಎಸ್ಐಆರ್- ಎನ್ಎಎಲ್, ಐಎಎಫ್-ಎಎಸ್ಟಿಇ, ಸೆಂಟರ್ ಫಾರ್ ಮಿಲಿಟರಿ ಏರ್ವರ್ದಿನೆಸ್ ಅಂಡ್ ಸರ್ಟಿಫಿಕೇಶನ್ (ಸಿಇಎಂಐಎಲ್ಎಸಿ) ಎಚ್ಎಎಲ್ ಮತ್ತು ವೈಮಾನಿಕ ಗುಣಮಟ್ಟ ಖಾತರಿ ಮಹಾನಿರ್ದೇಶನಾಲಯ (ಡಿಜಿಎಕ್ಯೂಎ) ಸಂಯುಕ್ತವಾಗಿ ಮಾಡಿವೆ.

ಸರಸ್ ಪಿಟಿ1ಎನ್ ವಿಮಾನವು ಸರಸ್ ವೈಮಾನಿಕ ಯೋಜನೆಯ ಮೇಲ್ದರ್ಜೆಗೇರಿಸಿದ ಅವತರಣಿಕೆಯಾಗಿದೆ. ಇದು 14 ಆಸನಗಳ ವಿಮಾನವಾಗಿದ್ದು, ಇದರ ಉತ್ಪಾದನಾ ಅವತರಣಿಕೆ 19 ಆಸನಗಳ ಸೌಲಭ್ಯವನ್ನು ಹೊಂದಿರುತ್ತದೆ. ಇದು ಏಳು ಟನ್ ತೂಕವಿದ್ದು, ಗಂಟೆಗೆ 425 ಕಿಲೋಮೀಟರ್ ಪ್ರಯಾಣ ಕೈಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಗರಿಷ್ಠ ಐದು ಗಂಟೆಗಳ ನಿರಂತರ ವೈಮಾನಿಕ ಯಾನವನ್ನು ಕೈಗೊಳ್ಳಬಹುದಾಗಿದೆ.

ವಿಮಾನದ ಮೇಲ್ದರ್ಜೆಗೇರಿಸಿದ ಅವತರಣಿಕೆಯು ಅತ್ಯಾಧುನಿಕ ವೈಮಾನಿಕ ವ್ಯವಸ್ಥೆಯನ್ನು ಒಳಗೊಂಡಿದ್ದು, ಸುಧಾರಿತ ರಾಡಾರ್, ಲೀನಿಯರ್ ವಿಂಗ್ ಫ್ಲಾಪ್ ಎಕ್ಯುಯೇಟರ್, ಎಂಜಿನ್ ಫ್ಲಾಪ್ ಎಕ್ಯುಯೇಟರ್, ಪರಿಸರ ನಿಯಂತ್ರಣ, ಉತ್ತಮ ವಿಮಾನ ನಿಯಂತ್ರಣ ವ್ಯವಸ್ಥೆ, ಉತ್ತಮ ನಿಯಂತ್ರಣಕ್ಕಾಗಿ ದೊಡ್ಡ ಪ್ರಮಾಣದ ಲೋಹದ ರಡ್ಡರ್, ಮರುವಿನ್ಯಾಸಗೊಳಿಸಲಾದ ಲ್ಯಾಂಡಿಂಗ್ ಗೇರ್ ಆಕ್ಯುಯೇಟರ್, ಅತ್ಯಾಧುನಿಕ ಬ್ರೇಕ್ ಸಿಸ್ಟಮ್ ಮತ್ತು ಅಗ್ನಿ ನಿರೋಧಕ ವಿನ್ಯಾಸವನ್ನು ಹೆಚ್ಚಿನ ಸುರಕ್ಷೆಗಾಗಿ ಹೊಂದಿದೆ.

ಹಿನ್ನೆಲೆ

ವಿಮಾನಕ್ಕೆ ಭಾರತೀಯ ಕೊಕ್ಕರೆ ಪ್ರಬೇಧವಾದ ಸರಸ್ ಹೆಸರನ್ನು ಇಡಲಾಗಿದೆ. ಲಘು ವಿಮಾನವನ್ನು ತಯಾರಿಸುವ ಪರಿಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ 1990 ದಶಕದಲ್ಲಿ ಮಾಡಲಾಗಿತ್ತು. ಅಲ್ಪ ಅಂತರದ ನಾಗರಿಕ ವಿಮಾನಯಾನ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗುತ್ತಿದೆ. ವಿಮಾನದ ಮೂಲ ವಿನ್ಯಾಸದಲ್ಲಿ ಗರಿಷ್ಠ 6100 ಕಿಲೋಗ್ರಾಂ ತೂಕವನ್ನು ಟೇಕಾಫ್ ಸಂದರ್ಭದಲ್ಲಿ ಹೊಂದುವ  ಹಾಗೂ ಗರಿಷ್ಠ ಪೇಲೋಡ್ 1232 ಕೆ.ಜಿ ಎಂದು ನಿಗದಿಪಡಿಸಲಾಗಿತ್ತು.

ಸರಸ್ ಲಘು ಸಾರಿಗೆ ವಿಮಾನದ ಮೊದಲ ಮಾದರಯನ್ನು 2004 ಮೇ ತಿಂಗಳಲ್ಲಿ ಸಿದ್ಧಪಡಿಸಲಾಗಿತ್ತು. ಸರಸ್ ಪಿಟಿ1ಎನ್ ವಿಮಾನದ ಮೇಲ್ದರ್ಜೆಗೇರಿಸಿದ ಅವತರಣಿಕೆಯಾಗಿದೆ. ಮೊದಲು ಸರಸ್ ಮೂಲಮಾದರಿಯ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಆದರೆ ಇದು ಹಾರಾಟದ ಹಂತದಲ್ಲಿ ಅಪಘಾತಕ್ಕೀಡಾಗಿ ಮೂವರು ಸಿಬ್ಬಂದಿ 2009 ಮಾರ್ಚ್ನಲ್ಲಿ ಮೃತಪಟ್ಟಿದ್ದರು.

Comment